Bengaluru, Dec 23: Teacher’s Orientation Program was conducted here in Rashtrotthana Vidya Kendra – Banashankari. Smt. D S Katyayani, Principal of RV Teachers College, took the session on Adaptation to Inclusive Education and Smt. Shalini Rao, Vice Principal of RV Teachers College, spoke on Action Research.
ಬೆಂಗಳೂರು, ಡಿಸೆಂಬರ್ 23: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮೊದಲನೇ ಅವಧಿಯಲ್ಲಿ ಶ್ರೀಮತಿ ಡಿ. ಎಸ್. ಕಾತ್ಯಾಯಿನಿ ಮಾತಾಜಿಯವರು ಆಗಮಿಸಿದ್ದರು. ಇವರು ಆರ್.ವಿ. ಶಿಕ್ಷಕರ ಕಾಲೇಜಿನ ಪ್ರಾಂಶುಪಾಲರಾಗಿರುತ್ತಾರೆ. ಇವರು ತಮ್ಮ ಅವಧಿಯಲ್ಲಿ ಅಂತರ್ಗತ ಶಿಕ್ಷಣಕ್ಕೆ ಹೊಂದಿಕೊಳ್ಳುವಿಕೆ ಎಂಬ ವಿಷಯದ ಬಗ್ಗೆ ನಮ್ಮ ಶಾಲಾ ಶಿಕ್ಷಕರಿಗೆ ಅರಿವು ಮೂಡಿಸಿದರು. ಅಂತರ್ಗತ ಶಿಕ್ಷಣದ ಪ್ರಕಾರ ದೈಹಿಕ ಅಂಗವಿಕಲತೆ ಇರುವ ಮಕ್ಕಳನ್ನು ಶಾಲೆಯಲ್ಲಿ ಯಾವ ರೀತಿಯಲ್ಲಿ ನೋಡಿಕೊಳ್ಳುವುದು ಎಂಬ ವಿಚಾರವನ್ನು ಇವರು ಶಿಕ್ಷಕರಿಗೆ ಮನದಟ್ಟು ಮಾಡಿದರು. ಈ ಮಕ್ಕಳನ್ನು ಇತರ ಮಕ್ಕಳಿಗಿಂತ ಪ್ರತ್ಯೇಕವಾಗಿ ಇರಿಸುವ ಬದಲು ಇತರ ಮಕ್ಕಳ ಜೊತೆಯಲ್ಲಿ ಸೇರಿಸಿ ಶಿಕ್ಷಣವನ್ನು ಕೊಡಿಸುವ ಅವಶ್ಯಕತೆ ಇದೆ. ಆ ಮೂಲಕ ಈ ಮಕ್ಕಳಿಗೂ ತಮ್ಮ ದೌರ್ಬಲ್ಯವನ್ನು ಮೀರಿ ಪ್ರಯತ್ನಪಡಲು ಸಾಧ್ಯವಾಗುತ್ತದೆ. ಹಾಗೆಯೇ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಮಾಡಲು ಸಮಯ ಕೊಡಬೇಕು ಮತ್ತು ಮಕ್ಕಳ ಮಟ್ಟಕ್ಕಿಳಿದು ಅವರಿಗೆ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.
ಹಾಗೆ ನರಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯವಿಲ್ಲ, ಆದರೆ ಅದಕ್ಕೆ ಪರ್ಯಾಯವಾಗಿ ಯಾವ ರೀತಿಯಲ್ಲಿ ಮಕ್ಕಳಲ್ಲಿ ಬದಲಾವಣೆ ತರಬಹುದು ಎಂದು ಅವರು ಅನೇಕ ಉದಾಹರಣೆಗಳ ಮೂಲಕ ತಿಳಿಸಿದರು. ಹಾಗೆಯೇ ಇವರು ಡಿಸ್ಲೆಕ್ಸಿಯಾ ಎಂಬ ಒಂದು ತೊಂದರೆಯ ಬಗ್ಗೆ ತಿಳಿಸುತ್ತಾ, ಇದು ಕಲಿಕೆಯಲ್ಲಿಯ ತೊಂದರೆಯನ್ನು ಉಂಟುಮಾಡುವಂತಹ ಒಂದು ಕಾಯಿಲೆಯಾಗಿದ್ದು, ಇದು ಓದುವಿಕೆಯಲ್ಲಿ ಮತ್ತು ಕಾಗುಣಿತವನ್ನು ಗಮನಿಸುವಲ್ಲಿ ತೊಂದರೆ ಉಂಟುಮಾಡುತ್ತದೆ. ಇದು ನರದೌರ್ಬಲ್ಯದಿಂದ ಉಂಟಾಗುವ ನೋಡುವಿಕೆ ಅಥವಾ ಕೇಳುವಿಕೆಯ ಅಥವಾ ಕ್ರಮಬದ್ಧವಾದ ಓದುವ ವಿಧಾನದಕೊರತೆಯಿಂದ ಉಂಟಾಗುವ ತೊಂದರೆಗಿಂತ ಭಿನ್ನವಾದ ತೊಂದರೆಯಾಗಿದೆ ಎಂದರು.
ಮುಂದೆ ಡಿಸ್ಗ್ರಾಫಿಯಾ – ರೋಗ ಅಥವಾ ಮಿದುಳಿನ ಹಾನಿಯ ಲಕ್ಷಣವಾಗಿ ಸುಸಂಬದ್ಧವಾಗಿ ಬರೆಯಲು ಅಸಮರ್ಥತೆ ಉಂಟಾಗುವ ಒಂದು ರೋಗದ ಬಗ್ಗೆಯೂ ತಿಳಿಸಿದರು. ಮಕ್ಕಳಿಗೆ ಪದಗಳ ಶಬ್ದವನ್ನು ಸ್ಪಷ್ಟವಾಗಿ ಅರ್ಥೈಸುವ ಮೂಲಕ ಈ ರೋಗದಿಂದ ಸ್ವಲ್ಪ ಮಟ್ಟಿಗೆ ಹೊರ ತರಬಹುದು ಎಂದರು.
ಎರಡನೆಯ ಅವಧಿಯಲ್ಲಿ ಶ್ರೀಮತಿ ಶಾಲಿನಿ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಇವರು ಆರ್.ವಿ. ಶಿಕ್ಷಕರ ಕಾಲೇಜಿನ ಉಪ ಪ್ರಾಂಶುಪಾಲರಾಗಿದ್ದಾರೆ. ಇವರು ಕ್ರಿಯಾಶೀಲ ಸಂಶೋಧನೆ ಎಂಬ ವಿಷಯದ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸಿದರು.
ಶಿಕ್ಷಣದಲ್ಲಿ ಕ್ರಿಯಾಶೀಲ ಸಂಶೋಧನೆಯ ಮೂಲಕ ಬದಲಾವಣೆಯನ್ನು ಉಂಟು ಮಾಡುವುದು ಹೇಗೆ ಎಂದು ತಿಳಿಸಿದರು. ಆಂತರಿಕ ಪ್ರೇರಣೆ ಇಲ್ಲದಿದ್ದರೆ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಮಾಹಿತಿಯನ್ನು ಸಂಗ್ರಹಿಸುವುದು, ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವುದು, ಈ ರೀತಿ ಎರಡು ಹಂತಗಳಲ್ಲಿ ಕ್ರೀಯಾಶೀಲ ಸಂಶೋಧನೆಯನ್ನು ನಡೆಸಬಹುದು ಎಂದರು. ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಯೇ ಪರಿಹಾರವನ್ನು ಕಂಡುಕೊಳ್ಳಲು ಸಮರ್ಥರು. ಏಕಾಂಗಿಯಾಗಿ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕು. ಮೊದಲು ಸಮಸ್ಯೆ ಏನು ಎಂಬುದನ್ನು ಕಂಡು ಹಿಡಿದು, ನಂತರ ಸಮಸ್ಯೆಯ ಮೂಲ ಯಾವುದು ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಬೇಕು, ಸಮಸ್ಯೆಗೆ ಕಾರಣವನ್ನು ಕಂಡುಹಿಡಿಯಬೇಕು, ನಂತರ ಕ್ರಿಯಾಶೀಲ ಸಂಶೋಧನೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪೂರ್ವ ಪರೀಕ್ಷೆ ಮತ್ತು ಸಮಸ್ಯೆಗೆ ಪರಿಹಾರದ ನಂತರದ ಪರೀಕ್ಷೆಯನ್ನು ನಡೆಸಬೇಕು, ಈ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.